ಹೊಸನಗರದ ಮೂಲೆಗದ್ದೆ ಮಠದಲ್ಲಿ ನಡೆದ ಶರಾವತಿ ಹೋರಾಟದ ಪೂರ್ವಭಾವಿ ಸಭೆ.

"ಮಲೆನಾಡಿನ ಜೀವನದಿ ಶರಾವತಿ ಬೆಂಗಳೂರಿಗೆ ಬೇಡ"
ಮುಖ್ಯಾಂಶಗಳು :
ಸಿ ಎಂ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ. 
ಅವೈಜ್ಞಾನಿಕ ಯೋಜನೆ ಕೈಬಿಡಲು ಒಮ್ಮತದ ಆಗ್ರಹ 

ಶಿವಮೊಗ್ಗ :
ಮಲೆನಾಡಿನ ರೈತರ ಜೀವನದಿ ಯಾಗಿರುವ ಶರಾವತಿಯ ನೀರನ್ನು ಹೊರಗೆ ಹರಿಸುವ ಸರ್ಕಾರದ ನಿರ್ಧಾರವನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲದೆ ದ್ದರೆ ಉಗ್ರ ಹೋರಾಟ ನಡೆಸ ಬೇಕಾಗುವುದೆಂದು ಸಭೆಯಲ್ಲಿ ಹೋರಾಟ ಒಕ್ಕೂಟದಿಂದ ಒಮ್ಮತದ ನಿರ್ಧಾರ ಪ್ರತಿಧ್ವನಿಸಿತು. 
ಬೆಂಗಳೂರಿಗೆ ಶರಾವತಿ ನದಿ ನೀರು ಹರಿಸುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡುವಂತೆ ಒತ್ತಾಯಿಸಲು ಮಠಾಧೀಶರು ಹಾಗೂ ವಿವಿಧ ಧರ್ಮ ಗುರುಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಆಂದೋಲನ ರೂಪಿಸಲು ತೀರ್ಮಾನಿಸಲಾಗಿದೆ.

ಸಮೀಪದ ಮೂಲೆಗದ್ದೆ ಮಠದಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿ ಕಣಿವೆ ಹೋರಾಟ ಸಮಿತಿ ಭಾನುವಾರ ಆಯೋಜಿಸಿದ್ದ ಪರಿಸರಾಸಕ್ತರ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.


ಸಭೆಯ ನೇತೃತ್ವ ವಹಿಸಿದ್ದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ‘ರಕ್ತ ಕೊಟ್ಟರೂ ಶರಾವತಿ ನದಿ ನೀರನ್ನು ಬಿಟ್ಟು ಕೊಡಲು ಒಪ್ಪಲಾಗದು ಎಂಬ ಘೋಷಣೆಯೊಂದಿಗೆ ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚು ಪ್ರಜ್ವಲಿಸುವಂತೆ ಮಾಡಬೇಕಿದೆ’ ಎಂದು ಘೋಷಿಸಿದರು.


‘ರಾಜಕೀಯ ಪಕ್ಷಗಳ ಮುಖಂಡರನ್ನು ಹೊರತುಪಡಿಸಿ ಹೋರಾಟ ರೂಪಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಆದರೆ ಎಲ್ಲಾ ಪಕ್ಷಗಳ ಮುಖಂಡರ ಬೆಂಬಲವನ್ನು ಹೋರಾಟಕ್ಕೆ ಕೋರಲಾಗುವುದು. ಎರಡೂ ಯೋಜನೆಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಲಾಗುವುದು’ ಎಂದು ತಿಳಿಸಿದರು.


‘ಗುರುತ್ವಾಕರ್ಷಣೆ ಸಿದ್ಧಾಂತಕ್ಕೆ ವಿರುದ್ಧವಾಗಿ ನದಿ ತಿರುವು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸಲು ಮುಂದಾಗಿದೆ. ಇದರಿಂದ ಶರಾವತಿ ಕಣಿವೆ ಅಭಯಾರಣ್ಯ ಪ್ರದೇಶದ ಕೇಂದ್ರ ಸ್ಥಾನಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಹೇಳಿದರು.


‘2017ನೇ ಸಾಲಿನಲ್ಲಿ ನದಿ ತಿರುವ ಯೋಜನೆ ಕೈಗೊಂಡಾದ ಅದರ ಅಂದಾಜು ವೆಚ್ಚ ₹ 4,000 ಕೋಟಿಯಾಗಿತ್ತು. ಈಗ ಅದು ₹ 8,000 ಕೋಟಿಗೆ ಏರಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಕೆಪಿಸಿಎಲ್ ಸಂಸ್ಥೆ ಪರಿಸರದ ಮೇಲೆ ಆಗುವ ದುಷ್ಟರಿಣಾಮಗಳನ್ನು ಮುಚ್ಚಿಡುವ ಲಾಭಕೋರ ಸಂಸ್ಥೆಯಾಗಿ ಕಾಣುತ್ತಿದೆ’ ಎಂದು ದೂರಿದರು.


‘ಯಾವುದೆ ವಿದ್ಯುತ್ ಯೋಜನೆ ಜಾರಿಗೊಳಿಸುವಾಗ ಮೊದಲು ಅದರ ವೆಚ್ಚ-ಲಾಭದ ಕುರಿತ ವಿಶ್ಲೇಷಣೆ ಆಗಬೇಕು. ಯೋಜನೆಯ ಸಾಧಕ ಬಾಧಕಗಳ ಕುರಿತು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಶರಾವತಿ ಪಂಪ್ಡ್ ಸ್ಟೋರೇಜ್, ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಕೆಲಸ ಮಾಡಿಲ್ಲ’ ಎಂದು ಇಂಧನ ತಜ್ಞ ಶಂಕರ ಶರ್ಮ ದೂರಿದರು.


‘ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಾವತಿ ನದಿಯ ಎಡ ಬಲದ ದಂಡೆಗಳಲ್ಲಿ 25 ಸಾವಿರ ಕುಟುಂಬಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿವೆ. ಈಗ ಈ ಭಾಗದ ಶರಾವತಿ ನದಿಗೆ ಸಮುದ್ರದ ನೀರು ಹಿಮ್ಮುಖವಾಗಿ ಹರಿಯುತ್ತಿದ್ದು ಸಿಹಿ ನೀರು ಉಪ್ಪು ನೀರಾಗಿ ಪರಿವರ್ತನೆಗೊಳ್ಳುತ್ತಿದೆ. ನದಿ ತಿರುವು, ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ ಶರಾವತಿ ನದಿಯ ಅಸ್ತಿತ್ವಕ್ಕೆ ಕಂಟಕ ಎದುರಾಗಲಿದೆ’ ಎಂದು ಹೊನ್ನಾವರದ ನೆರೆ ಸಂತ್ರಸ್ತರ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಕಾಂತ್ ಕುಚ್ರೇಕರ್ ತಿಳಿಸಿದರು.


‘ಶರಾವತಿ ನದಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಭೂಮಿಯ ಹಕ್ಕು ದೊರಕಿಲ್ಲ. ಈಗ ಅರಣ್ಯ ಇಲಾಖೆ ಸಂತ್ರಸ್ತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡುತ್ತಿದ್ದಾರೆ. ಹೀಗಾಗಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಮೊದಲು ಬಗೆಹರಿಸಿ ನಂತರ ನದಿ ತಿರುವು, ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಕುರಿತು ಸರ್ಕಾರ ಪರಿಶೀಲಿಸಬೇಕು’ ಎಂದು ವಿವಿಧ ಸಂಘಟನೆಗಳ ಪ್ರಮುಖರಾದ ತೀ.ನ.ಶ್ರೀನಿವಾಸ್, ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರೆ, ಸುರೇಶ್ ನಗರ ಪ್ರತಿಪಾದಿಸಿದರು.


ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು, ವಿಧಾನ ಪರಿಷತ್ ನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ವಿವಿಧ ಸಂಘಟನೆಗಳ ಪ್ರಮುಖರಾದ ಬಿ.ಎ.ಇಂದೂಧರ ಗೌಡ, ರವಿಕುಮಾರ್ ಗೌಡ, ಕವಿತಾ ಧಾರವಾಡ, ಶಾರದಾ ಧಾರವಾಡ, ರವಿ ಬಿದನೂರು, ಟಿ.ಆರ್.ಕೃಷ್ಣಪ್ಪ, ಯು.ಎಚ್.ರಾಮಪ್ಪ, ಕೆ.ವಿ.ಪ್ರವೀಣ್, ಸೀಮಾ ಶಿವಮೊಗ್ಗ, ಸಮನ್ವಯ ಕಾಶಿ, ಶ್ರೀಪಾದ ಬಿಚ್ಚುಗತ್ತಿ, ಬಿ.ಜಿ.ನಾಗರಾಜ್, ಆರ್.ಎಂ.ಷಣ್ಮುಖ, ಕೆ.ಎಸ್.ಪ್ರಶಾಂತ್ ಮಾತನಾಡಿದರು.


ಪ್ರಮುಖರಾದ ಧನುಷ್ ಕುಮಾರ್, ಎಂ.ವಿ.ಪ್ರತಿಭಾ, ಐ.ವಿ.ಹೆಗಡೆ,ಅನಿತಾ ಕುಮಾರಿ, ಚಕ್ರವಾಕ ಸುಬ್ರಮಣ್ಯ, ಜಿ.ಆರ್.ಪಂಡಿತ್, ಎಲ್.ವಿ.ಅಕ್ಷರ, ಪೂರ್ಣಿಮಾ ಬಸವರಾಜ್, ಸೌಮ್ಯ ಗಿರೀಶ್, ಭದ್ರೇಶ್ ಬಾಳಗೋಡು, ಜಿ.ವಿ.ರವೀಂದ್ರ, ಸುಗಂಧರಾಜ್, ಕೇಶವ ನಾಯ್ಕ ಬಳ್ಕೂರು, ಮಂಜುನಾಥ್ ನಾಯ್ಕ್ ಗೇರುಸೊಪ್ಪ, ವಿನೋದ್ ನಾಯ್ಕ್ ಮಾವಿನಹೊಳೆ ಇದ್ದರು.


‘ಭಾರತವೇ ಧರ್ಮ, ಪ್ರೀತಿಯೇ ಪಕ್ಷ’

‘ಸರ್ವ ಜನಾಂಗದ ಶಾಂತಿಯ ತೋಟ ಮೂಲೆಗದ್ದೆ ಮಠ ಎಂಬ ಮಾತು ಪ್ರಚಲಿತದಲ್ಲಿದೆ. ನಮಗೆ ಭಾರತವೇ ಧರ್ಮ, ಸಮನ್ವಯವೇ ರಾಜ್ಯ, ಪ್ರೀತಿಯೇ ಪಕ್ಷ. ಹೀಗಾಗಿ ಎಲ್ಲಾ ಧರ್ಮ, ಜಾತಿ, ಪಕ್ಷಗಳ ಪ್ರಮುಖರನ್ನು ಸೇರಿಸಿಕೊಂಡು ಮಾರಕ ಯೋಜನೆ ವಿರುದ್ಧ ಹೋರಾಟ ರೂಪಿಸಲಾಗುವುದು’ ಎಂದು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸ್ಪಷ್ಟಪಡಿಸಿದರು.


ಮಾರ್ದನಿಸಿದ ಪ್ರತ್ಯೇಕ ರಾಜ್ಯದ ಬೇಡಿಕೆ

ಮಲೆನಾಡಿನ ಜನರು ಜಲ ವಿದ್ಯುತ್ ಯೋಜನೆಗಾಗಿ ಎರಡು ಬಾರಿ ‘ಮುಳುಗಡೆ’ಯಾಗಿದ್ದಾರೆ. ಹಿಂದೊಮ್ಮೆ ತುಂಗಾ ಮೂಲ ಉಳಿಸಿ ಹೋರಾಟ ಸಂದರ್ಭದಲ್ಲಿ ಕೆ.ವಿ.ಸುಬ್ಬಣ್ಣ ಅವರು ಸರ್ಕಾರ ನಮ್ಮ ಬೇಡಿಕೆಗೆ ಮಣಿಯದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮಂಡಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಈಗಲೂ ಸರ್ಕಾರ ನದಿ ತಿರುವು, ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಪಟ್ಟು ಹಿಡಿದರೆ ಮಲೆನಾಡಿಗರು ಪ್ರತ್ಯೇಕ ರಾಜ್ಯದ ಬೇಡಿಕೆ ಇಡಬೇಕಾಗುತ್ತದೆ ಎಂಬ ಧ್ವನಿ ಸಭೆಯಲ್ಲಿ ಮಾರ್ದನಿಸಿತು.


ವರದಿ : ಸುಕುಮಾರ್ ಎಂ 
ಚಿತ್ರ ಕೃಪೆ: ಕಾರ್ತಿಕ್ ಗೌಡ ಹೊಸನಗರ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

High alert in Sharavati project area. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ.

ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಯೋಜನಾ ಸಂತ್ರಸ್ತರು ಹಾಗೂ ಭೂ ಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ರಚನೆ ಅಗತ್ಯ: ಸಚಿವ ಎಸ್ ಮಧು ಬಂಗಾರಪ್ಪ