ಶರಾವತಿ ಮೇಲೆ ಮೈತ್ರಿ ಸರ್ಕಾರದ ಕೆಂಗಣ್ಣು...!?


ಶರಾವತಿ ಮೇಲೆ ಮೈತ್ರಿ ಸರ್ಕಾರದ ಕೆಂಗಣ್ಣು. 


ಶಿವಮೊಗ್ಗ:
ಪಶ್ಚಿಮ ಘಟ್ಟದಲ್ಲಿ ಮತ್ತೆ ಸಂಚಲನ ಉಂಟಾಗಿದೆ ದಕ್ಷಿಣ ಭಾರತದ ಸ್ವರ್ಗ ಎಂದು ಕರೆಯಲ್ಪಡುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪರಿಸರ ವಿರೋಧಿ ಯೋಜನೆ ಕೈಗೊಳ್ಳುವ ಮೂಲಕ ಮತ್ತೆ ಮಲೆನಾಡಿನ ಅಸ್ತಿತ್ವವನ್ನೇ ಅಳಿಸಲು ಸರ್ಕಾರ ಮುಂದಾಗಿದೆ.

 ಶರಾವತಿ ನದಿ ಬೆಂಗಳೂರಿಗೆ ಹರಿಸುವ ಬೃಹತ್ ಯೋಜನೆಗೆ ಸದ್ದಿಲ್ಲದೆ ತಯಾರಿ ನಡೆದಿದೆ. ಈ ಮೂಲಕ ಸರ್ಕಾರ ಕೆಲವು ಪಟ್ಟಭದ್ರ ಹಿತಾಸಕ್ತಿಗೆ.
ಬಂಡವಾಳಶಾಹಿಗಳ ಲಾಭಿಗೆ ಮಣಿದಂತಿದೆ. ಈ ಮೂಲಕ ಸಮ್ಮಿಶ್ರ ಸರ್ಕಾರ ಮಲೆನಾಡಿಗರನ್ನು
ಕೆರಳಿಸುವ ಮೂಲಕ ಮತ್ತೊಮ್ಮೆ ಸಮಾಜದಿಂದ ನೆಲದಲ್ಲಿ ಹೋರಾಟಕ್ಕೆ ನಾಂದಿಹಾಡಿದೆ.


ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿ ಡಿಪಿಆರ್ ನೆಡೆಸಲು ಡಿಸಿಎಂ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ. ಪರಿಸರವಾದಿಗಳು, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪ್ರಭಲವಾಗಿ ಪಕ್ಷಾತೀತವಾಗಿ ಈ ಯೋಜನೆಯನ್ನು ವಿರೋಧಿಸಿ ಬೀದಿಗಿಳಿದು ವಿರೋಧಿಸುತ್ತಿದ್ದಾರೆ.

ಏನಿದು ಶರಾವತಿ ನದಿ ನೀರು ತರುವ ಯೋಜನೆ?
ನಾಡಿಗೆ ಬೆಳಕು ನೀಡುವಲ್ಲಿ ಮಹತ್ತರ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯ ನೀರಿಲ್ಲದೆ ಉಸಿರುಗಟ್ಟಿ ವಿದ್ಯುತ್‌ ಉತ್ಪಾದಿಸುತ್ತಿದೆ. ತನ್ನೊಡಲೇ ಖಾಲಿ ಇರುವಾಗ ಇನ್ನೂಂದೆಡೆ ಇರುವ ನೀರಲ್ಲಿ ಒಂದಿಷ್ಟುಪಾಲು ಹಂಚಬೇಕು ಎಂಬ ಆದೇಶ ಹೊರಡಿಸಲು ಸರ್ಕಾರದ ಸಿದ್ಧತೆ ಆರಂಭಗೊಂಡಿದೆ. ಇದುವೇ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ  ಅಪ್ರಯೋಜಕ ಯೋಜನೆ. 2021ರಿಂದ 2050ರ ವರೆಗೆ ಬೆಂಗಳೂರಿನ
ಕುಡಿಯುವ ನೀರಿನ ಬೇಡಿಕೆಯನ್ನು ಆಧಾರವಾಗಿಟ್ಟು ಲಿಂಗನಮಕ್ಕಿಯಿಂದ ನೀರು ಪೂರೈಸುವ ಯೋಜನೆಯಿದು ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ಸರಬರಾಜು ಮಾಡುವುದು. ನಂತರದ ದಿನಗಳಲ್ಲಿ 20 ಟಿಎಂಸಿ ನೀರನ್ನು ಪೂರೈಸುವ ಪ್ರಸ್ತಾಪ ಯೋಜನೆಯಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 30 ಟಿಎಂಸಿ ನೀರನ್ನು ಒಯ್ದಲ್ಲಿ ಬೆಂಗಳೂರು ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಾದ ಕೋಲಾರ ಸೇರಿದಂತೆ ನೆರೆಯ ಬರಪೀಡಿತ ಜಿಲ್ಲೆಗಳಿಗೂ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂಬುದು ಯೋಜನೆಯ ಆರಂಭದ ಚಿಂತನೆ.
ಹೌದು ಲಿಂಗನಮಕ್ಕಿ ನೀರು ಬೆಂಗಳೂರಿಗೆ ನೀಡುವ "ತ್ಯಾಗರಾಜ್ ವರದಿ" ಅನುಷ್ಠಾನಕ್ಕೆ ಮುಂದಾದ ಸರ್ಕಾರ. ಪ್ರಮುಖವಾಗಿ ಈ ಪ್ರಸ್ತಾಪವು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷ ಬಿ.ಎನ್‌. ತ್ಯಾಗರಾಜ್‌ ನೇತೃತ್ವದ ಸಮಿತಿಯೊಂದನ್ನು ಹಿಂದಿನ ಸರ್ಕಾರ ರಚಿಸಿತ್ತು. ಈ ಸಮಿತಿ ಕಳೆದ ವರ್ಷ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ಈ ವರದಿಯಲ್ಲಿ ಶರಾವತಿಯಿಂದ ನೀರು ತರುವ ಯೋಜನೆ ಬಗ್ಗೆ ವಿವರವಾಗಿ ಪ್ರಸ್ತಾಪಿಸಲಾಗಿದ್ದು, ಯೋಜನೆಯಿಂದ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಬಹುದು ಎಂದು ಹೇಳಿದೆ. ಅದ್ದರಿಂದಲೇ ಸರ್ಕಾರ ತರಾತುರಿಯಲ್ಲಿ ಯೋಜನೆ ಜಾರಿಗೆ ಮುಂದಾಗಿದೆ. ಆದರೆ ವರದಿಯು ಬೆಂಗಳೂರಿಗೆ ನೀರು ಹರಿಸುವ ಬಗ್ಗೆ ಮಾತ್ರ ಹೆಚ್ಚಿನಗಮನ ಹರಿಸಿದ್ದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಹಾಗೂ ಪಶ್ಚಿಮ ಘಟ್ಟ. ಮಲೆನಾಡಿನ ಬದುಕಿನ ಬಗ್ಗೆ ಯಾವುದೇ ಕಾಳಜಿ ವಹಿಸದೇ ಇರುವುದು ತೀವ್ರ ಆಕ್ಷೇಪಣೆಗೆ ಗುರಿಯಾಗಿದೆ. ಈಗಾಗಲೇ ಹಲವು ಪರಿಸರ ವಿರೋಧಿ ನೀತಿಗಳಿಂದ ಪಶ್ಚಿಮ ಘಟ್ಟ ಅಳಿವಿನಂಚಿನಲ್ಲಿದೆ. ಇದರ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಇಂತಹ ಬೃಹತ್ ಪರಿಸರ ವಿರೋಧಿ ಯೋಜನೆಗೆ ಮುಂದಾಗಿದ್ದು ಈ ಯೋಜನೆಗೆ ತಗಲುವ ಅಂದಾಜು ವೆಚ್ಚ 12 ಸಾವಿರ ಕೋಟಿ ರೂಪಾಯಿ. ವಿದ್ಯುತ್‌ ಉತ್ಪಾದನೆಯ ಉದ್ದೇಶವನ್ನೇ ಕೇಂದ್ರವಾಗಿಟ್ಟುಕೊಂಡು ಲಿಂಗನಮಕ್ಕಿ ಜಲಾಶಯ ನಿರ್ಮಿಸಿದ್ದು.ಸರ್‌.ಎಂ.ವಿಶ್ವೇಶ್ವರಯ್ಯ ಅವರ ಕನಸಿನ ಕೂಸು ಇದು. ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದಿಸುವ ಕೇಂದ್ರವಾಗಿದ್ದು ರಾಜ್ಯದ ಬೇಡಿಕೆಯ ಶೇ.30 ವಿದ್ಯುತ್ ಪೂರೈಕೆ ಮಾಡುತ್ತಿದೆ. ಅಲ್ಲದೆ ಪ್ರಮುಖವಾಗಿ ಕರ್ನಾಟಕ ಸರ್ಕಾರ ಹಾಗೂ ಕೆ.ಪಿ.ಟಿ.ಸಿ.ಎಲ್ ನಡುವಿನ ಒಡಂಬಡಿಕೆಯಂತೆ ವಿದ್ಯುತ್ ಉತ್ಪಾದನೆ ಹೊರತು ಬೇರಾವುದೇ ಉದ್ದೇಶಕ್ಕೆ ಈ ನೀರನ್ನು ಬಳಸಿಕೊಳ್ಳುವಂತಿಲ್ಲ.ಜೊತೆಗೆ ಕೆ.ಪಿ.ಟಿ.ಸಿ.ಎಲ್ ಕೂಡ ಈ ಬಗ್ಗೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. 
ಹಾಗೂ ಈ ಯೋಜನೆ ಕುರಿತು ವರದಿ ನೀಡಿರುವ ತ್ಯಾಗರಾಜ್‌ ನೇತೃತ್ವದ ಸಮಿತಿಯು ಲಿಂಗನಮಕ್ಕಿ ಜಲಾಶಯಲ್ಲಿ ವಿದ್ಯುತ್‌ ಉತ್ಪಾದನೆ ಕಡಿತಗೊಳಿಸಿ ಎಂದು ಹೇಳಿದೆ. ಇದು ಪರಸ್ಪರ ವಿರೋಧಾಭಾಸವನ್ನು ಹೊಂದಿದೆ. ಸುಮಾರು 12 ಸಾವಿರ ಕೋಟಿ ರು. ವೆಚ್ಚದ ಯೋಜನೆಯಿದು ಎಂದು ಆರಂಭದಲ್ಲಿ ಅಂದಾಜಿಸಿದೆ. ಲಿಂಗನಮಕ್ಕಿಯಿಂದ ಪಂಪ್‌ ಮೂಲಕ ನೀರನ್ನು ಮೇಲೆತ್ತಿ ಪೈಪ್‌ ಮೂಲಕ ಅದನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಯೋಜನೆಯ ಪ್ರಮುಖ ಉದ್ದೇಶ. ಆದರೆ ಈ ಅವೈಜ್ಞಾನಿಕ ಯೋಜನೆಗೆ 
ತಜ್ಞರು, ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಪರಿಸರವಾದಿಗಳ ಪ್ರಕಾರ ಇದೊಂದು ಸಂಪೂರ್ಣ ಅವೈಜ್ಞಾನಿಕವಾದ ಯೋಜನೆ. ಎಲ್ಲಿಯ ಬೆಂಗಳೂರು, ಎಲ್ಲಿಯ ಲಿಂಗನಮಕ್ಕಿ. ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ  ಸಮ್ಮಿಶ್ರ ಸರ್ಕಾರ ಈ ಯೋಜನೆಗೆ ಹಟಕ್ಕೆ ಬಿದ್ದಂತಿದೆ. ಡಿಸಿಎಂ ಪರಮೇಶ್ವರ್ ಈಗಾಗಲೇ ಯೋಜನೆ ಜಾರಿಗೆ  ಖುುದ್ದು ಆಸಕ್ತಿ ವಹಿಸಿದ್ದು ಮಲೆನಾಡಿನಲ್ಲಿ ಆತಂಕ ಮೂಡಿಸಿದೆ. 

ಜಲಾಶಯದ  ಅಂಕಿಅಂಶಗಳು 
ಸಮುದ್ರ ಮಟ್ಟದಿಂದ 1819 ಅಡಿ ಎತ್ತರದಲ್ಲಿರುವ ಲಿಿಂಗನಮಕ್ಕಿ ಜಲಾಶಯ. 
ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 151.75. ಟಿಎಂಸಿ ನೀರು. 
ಪ್ರಸ್ತುತ 1743.85 ಅಡಿ ನೀರನ್ನು ಹೊಂದಿದ್ದು
138 ಟಿಎಂಸಿ ನೀರಿನ ಕೊರತೆ ಇದೆ. 
75.15 ಅಡಿಗಳಷ್ಟು ನೀರು ಬಂದರೆ ಮಾತ್ರ ಜಲಾಶಯ ಸಂಪೂರ್ಣ ಭರ್ತಿಯಾಗುತ್ತವೆ. 
10 ಟಿಎಂಸಿ ಅಡಿ ಲಿಂಗನಮಕ್ಕಿ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆ ಉದ್ದೇಶ. ಜಲಾಶಯದಿಂದ 300 ಕಿ. ಮೀ. ದೂರದಲ್ಲಿರುವ ಬೆಂಗಳೂರು ನಗರ.
ಯೋಜನೆಗೆ ಬೇಕಾಗುವ ವಿದ್ಯುತ್ 375 ಮೆ.ವ್ಯಾ.  ಯೋಜನೆ ಅಂದಾಜು ವೆಚ್ಚ ಕನಿಷ್ಟ 12.000 ಕೋಟಿ ರೂಪಾಯಿಗಳು. 

ಪ್ರಸ್ತುತ ಲಿಂಗನಮಕ್ಕಿ ಜಲಾಶಯ ಪ್ರತಿ ವರ್ಷ ಉಕ್ಕಿ ಹರಿದು ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿಲ್ಲ ತುಂಬುವ ಸಾಧ್ಯತೆಯೇ ಕಡಿಮೆ. ಸುಮಾರು 18 ಭಾರಿ ಮಾತ್ರ ಜಲಾಶಯ ಭರ್ತಿಯಾಗಿದೆ ಅಷ್ಟೇ..! 
ಇನ್ನು ವ್ಯರ್ಥವಾಗಿ ಹರಿಯುವ ಪ್ರಶ್ನೆಯೇ ಇಲ್ಲ. ಇರುವ ನೀರನ್ನು ಸುಮ್ಮನೆ ಬಿಟ್ಟಿಲ್ಲ. ಹನಿ ಹನಿ ನೀರನ್ನು ಜೋಪಾನವಾಗಿ ಬಳಕೆ ಮಾಡಲಾಗುತ್ತಿದೆ.
ಇಷ್ಟಿದ್ದರೂ ಬೇಸಿಗೆ ಕೊನೆಯಲ್ಲಿ ನೀರು ಪಾತಾಳ ಮುಟ್ಟಿರುತ್ತದೆ. ವಿದ್ಯುತ್‌ ಉತ್ಪಾದನೆಗೆ ಸಿಗದೆ ಕಡಿಮೆ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇರುವ ನೀರಿನಲ್ಲಿ ಇಡೀ ವರ್ಷ ಸಮ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಹಾಕುತ್ತಾರೆ. ಹಾಗಿರುವಾಗ ಇಲ್ಲದ ನೀರನ್ನು ಕೊಂಡೊಯ್ಯುವುದಾದರೂ ಹೇಗೆಂಬ ಪ್ರಶ್ನೆ ಎದುರಾಗಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಪ್ರತಿಕ್ರಿಯೆಗಳನ್ನು ಕೇಳದೆ ತರಾತುರಿಯಲ್ಲಿ ಡಿಪಿಆರ್ ನೆಡೆಸಲು ಸೂಚನೆ ನೀಡಿದೆ. ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಬೇಕು ಹೌದು ಮಾನವೀಯತೆಯ ದೃಷ್ಟಿಯಿಂದ ಇದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ನಿಜ. ಆದರೆ ಶರಾವತಿ ನದಿ ಪ್ರದೇಶದಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ  ಎಂಬುದು ಸ್ಥಳೀಯರ ಅಳಲು. ಬೆಂಗಳೂರಿಗೆ ಬೇಕಾಗುವ ನೀರನ್ನು ಅಲ್ಲಿಯೇ ಮಳೆಕೊಯ್ಲಿನ  ಮೂಲಕ
ನೀರು ಸಂಗ್ರಹಿಸುವ ಯೋಜನೆ ರೂಪಿಸಬೇಕೇ ಹೊರತು ದೂರದ ಮಲೆನಾಡಿನಿಂದ
ಕೊಂಡೊಯ್ಯುತ್ತೇವೆ ಎನ್ನುವುದು ಅವೈಜ್ಞಾನಿಕ ಎಂಬುದು ಹೋರಾಟಗಾರರ ವಾದ. 1964ರಲ್ಲಿ ನಿರ್ಮಾಣಗೊಂಡ  ಲಿಂಗನಮಕ್ಕಿ ಜಲಾಶಯದಲ್ಲಿ ಶೇ40. ರಷ್ಟು ಹೂಳು ತುಂಬಿದ್ದು ಇದುವರೆಗೆ ಯಾವುದೇ ಸರ್ಕಾರ ಈ ಬಗ್ಗೆ ಕ್ರಮವಹಿಸಿಲ್ಲ. ಹೆಚ್ಚುವರಿ ನೀರು ಹರಿದು ಬಂದು ಸಮುದ್ರ ಸೇರುವುದು ಇಲ್ಲ. ಎರಡು ಬಾರಿ ಮಾತ್ರ ಸ್ವಲ್ಪ ನೀರು ಹೊರ ಹರಿದಿದೆ. ಜಲಾಶಯ ತುಂಬಿಲ್ಲ ಎನ್ನುವುದಾದರೆ ಹೆಚ್ಚುವರಿ ನೀರೇ ಇಲ್ಲ ಎಂದರ್ಥನೀರೇ ಇಲ್ಲದಾಗ ಬೆಂಗಳೂರಿಗೆ ಕೊಂಡೊಯ್ಯುವುದಾದರೂ ಏನನ್ನು? ಎಂಬ ಪ್ರಶ್ನೆಗೆ ಸರ್ಕಾರದ ಉತ್ತರವಿಲ್ಲ. ಲಿಂಗನಮಕ್ಕಿ ಜಲಾಶಯ ತುಂಬಿದಾಗ ಅದರ ಎತ್ತರ ಸಮುದ್ರ ಮಟ್ಟದಿಂದ 1819.  ಬೆಂಗಳೂರು ಸಮುದ್ರ ಮಟ್ಟದಿಂದ 3000ಅಡಿ ಎತ್ತರದಲ್ಲಿದ್ದು ಬೆಂಗಳೂರಿನ ಅತಿ ಎತ್ತರದ ಸ್ಥಳದ ದೊಡ್ಡಬೆಟ್ಟನಹಳ್ಳಿ ಇರುವುದು ಸಮುದ್ರ ಮಟ್ಟದಿಂದ 3,150 ಅಡಿ ಎತ್ತರದಲ್ಲಿ. ಅಂದರೆ ಲಿಂಗನಮಕ್ಕಿಗಿಂತ ಬೆಂಗಳೂರು 1,330 ಅಡಿ ಎತ್ತರದಲ್ಲಿದೆ.
ಲಿಂಗನಮಕ್ಕಿಯಿಂದ ಪಂಪ್‌ ಮೂಲಕ ನೀರನ್ನು ಎತ್ತಿ,  ಬಳಿಕ 400 ಕಿ. ಮೀ. ದೂರದವರೆಗೆ ಸಾಗಿಸಬೇಕು. ಇದಕ್ಕೆ ಬೇಕಾಗುವ ಸರಿಸುಮಾರು 375 ಮೆ.ವ್ಯಾ. ವಿದ್ಯುತ್‌ ಬೇಕು. ಹಾಗಿದ್ದರೆ ಇದೆಲ್ಲ ಕಾರ್ಯ ಸಾಧುವೆ ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ ಈ ಯೋಜನೆ ಜಾರಿಯಾದರೆ ವಿದ್ಯುತ್‌ ಉತ್ಪಾದನೆ ಸಮಸ್ಯೆ ಇನ್ನಷ್ಟು ಹೆಚ್ಚಾಗುದರಲ್ಲಿ ಯಾವುದೇ ಅನುಮಾನವಿಲ್ಲ ಇಡೀ ರಾಜ್ಯದ ಬೇಡಿಕೆಯ .30ರಷ್ಟುವಿದ್ಯುತ್‌ ಪೂರೈಸುವ ಲಿಂಗನಮಕ್ಕಿಯಲ್ಲಿ ಈ ಯೋಜನೆಯಿಂದ ನೀರಿನ ಕೊರತೆ ಎದುರಾದರೆ ಮಲೆನಾಡು. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶೇ.30ರಷ್ಟು ವಿದ್ಯುತ್‌ ಪೂರೈಸುವುದು ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ
ಯೋಜನೆ ಬಗ್ಗೆ ಅವಲೋಕನ ನಡೆಸಬೇಕಿದೆ. 
ಪ್ರಮುಖವಾಗಿ ಲಿಂಗನಮಕ್ಕಿ ವಿದ್ಯುತ್‌ ಯೋಜನೆಯಿಂದ ಒಟ್ಟಾರೆ ವಿದ್ಯುತ್‌ ಉತ್ಪಾದನೆಯ ಸರಾಸರಿ ವೆಚ್ಚ ಕಡಿಮೆಯಾಗಿದೆ. ಆದರೆ ಲಿಂಗಮನಮಕ್ಕಿ ಸ್ಥಗಿತಗೊಂಡರೆ ವಿದ್ಯುತ್‌ ಕೂರತೆ ಹಾಗೂ ದುಬಾರಿಯಾಗಿ ಮತ್ತೆ ಸರ್ಕಾರ ಜನಸಾಮಾನ್ಯರ ಮೇಲೆ ಹೆಚ್ಚಿನ ಶುಲ್ಕ ವಸೂಲಿ ಮಾಡುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೆ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡದೆ ಇಂತಹ ಯೋಜನೆ ಕೈಗೆತ್ತಿಕೊಂಡಿರುವುದು ಎಷ್ಟು ಸರಿ. ಎಂಬ ಪ್ರಶ್ನೆ ಮೂಡುತ್ತದೆ. ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಮತ್ತು ಲಿಂಗನಮಕ್ಕಿ ತಟದಲ್ಲಿರುವ ನೂರಾರು ಹಳ್ಳಿಗಳು ನೀರಿನ ಸಮಸ್ಯೆ ಹಾಗೂ ಮೂಲಭೂತ ಸೌಕರ್ಯಗಳು ಸಿಗದೆ ಬಳಲುತ್ತಿವೆ. ವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಇವೆ. ಆದರೆ ಇದರ ಬಗ್ಗೆ ಸರ್ಕಾರಕ್ಕೆ ಯೋಚಿಸಲು ಕೂಡ ಸಮಯವಿಲ್ಲ. 
ಜಲಪಾತ ದಾಟಿದ ನದಿಯ ಉದ್ದಗಲಕ್ಕೂ ಅಪೂರ್ವವಾದ ಅರಣ್ಯ ಸಂಪತ್ತಿದೆ. ಜೀವ ವೈವಿಧ್ಯತೆಯಿದೆ. ನೂರಾರು ಹಳ್ಳಿಗಳಿವೆ. ಇದನ್ನೇ ಅವಲಂಬಿಸಿದ ಜನ ಜಾನುವಾರುಗಳಿವೆ. ಕೃಷಿ ಬದುಕಿದೆ. ಮೀನುಗಾರಿಕೆಯನ್ನೇ ಅವಲಂಬಿಸಿದ ಸಾವಿರಾರು ಮೀನುಗಾರರ ಕುಟುಂಬಗಳಿವೆ. 
ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಸಾದ್ಯವೇ.? 
ಈಗಾಗಲೇ ನಾಡಿಗೆ ಬೆಳಕು ಕೂಟ್ಟವರ ಬದುಕನ್ನನೇ ಮುಳುಗಿಸಿ ಸುಮಾರು 60 ವರ್ಷದಿಂದ ಯಾವುದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು  ಸರ್ಕಾರಕ್ಕೆ ಸಾಧ್ಯವಾಗಿಲ್ಲ ಆದರೆ ಇಲ್ಲಿನ ಜನರಿಗೆ ನೀರಿನ ಹಕ್ಕನ್ನು ನಿರಾಕರಿಸಿ ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಗೆ ಸರ್ಕಾರಕ್ಕೆ ಹಣ ಇದೇಯೇ..? ಹಿನ್ನೀರಿನ  ಭಾಗದ ಜನರ ಪ್ರಶ್ನೆಯಾಗಿದೆ. ಒಂದೊಮ್ಮೆ ಈ ಯೋಜನೆ ಅನುಷ್ಠಾನವಾದರೆ ಇಲ್ಲಿನ ಜೀವ ವೈವಿಧ್ಯದ ಮೇಲೆ ಭಾರೀ ಪರಿಣಾಮ ಬೀರಲಿದೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುದಂತೂ ಖಂಡಿತಾ. ಈ ಯೋಜನೆಯ ಜೊತೆಗೆ ಕಸ್ತೂರಿ ರಂಗನ್ ವರದಿ. ಮಾಧವ ಗಾಡ್ಗಿಲ್.ಹುಲಿ ಸಂರಕ್ಷಣಾವಲಯ, ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲಿ ಜನರನ್ನು ಅವವಾಸ ಸ್ಥಳದಿಂದ ಹೊರಹಾಕಲಾಗುತ್ತಿದೆ. ಇದರ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಅರಣ್ಯ ಒತ್ತುವರಿ ಸಂಬಂಧ ಹಲವು ಪ್ರಕರಣಗಳನ್ನು ದಾಖಲಿಸಿ  ಮಲೆನಾಡಿನ ಕೃಷಿಯ ಮೇಲೆ ನಿಯಂತ್ರಣ ಹೇರಲಾಗುತ್ತಿದೆ  ಇದು ಸಹ ಜನರಲ್ಲಿ ಆತಂಕ ಮೂಡಿಸಿದೆ. ಕಾವೇರಿ ನೀರು ಸೇರಿದಂತೆ ಹಲವು ಮೂಲಗಳಿಂದ ಈಗಾಗಲೇ ಬೆಂಗಳೂರಿಗೆ ನೀರು ಹರಿಸಲಾಗುತ್ತಿದೆ. ಸರ್ಕಾರದ ಕಣ್ಣು ಈಗ ಶರಾವತಿಯ ಮೇಲೇ ಬಿದ್ದಿದೆ. ಸಮುದ್ರಕ್ಕೆ ಸೇರುವ ನೀರನ್ನು ಬಳಸಿಕೊಳ್ಳುತ್ತೆವೆ. ಎಂದು ವಿಸ್ತೃತವಾದ ವರದಿ ತಯಾರಿಸಲು ಸರ್ಕಾರ ಮುಂದಾಗಿದೆ. ಶರಾವತಿ ನದಿಗೆ ಈ ಹಿಂದೆ ಲಿಂಗನಮಕ್ಕಿ ಜಲಾಶಯ ನಿರ್ಮಿಸಿದ ಪರಿಣಾಮ ಸಾವಿರಾರು ಜನರ ಬದುಕು ಈಗಲೂ ಅತಂತ್ರ ಸ್ಥಿತಿಯಲ್ಲಿದೆ ಎಂಬುದು ಗಮನಾರ್ಹ ಸಂಗತಿ.
ಮಲೆನಾಡಿನಲ್ಲಿಯೇ ಹಲವು ಪ್ರದೇಶಗಳು ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿದ್ದು. ಹಲವು ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಾರಕವಾಗಿರುವ ಯೋಜನೆ ಜಾರಿಗೆ ಮುಂದಾಗಿರುವುದು ಜನರ ನಿದ್ದೆಗೆಡಿಸಿದೆ. 

ಯೋಜನೆ ವಿರೋಧಿಸಿ ಈಗಾಗಲೇ ಒಕ್ಕೂಟ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು ಜುಲೈ 10ಕ್ಕೆ ಶಿವಮೊಗ್ಗ ಬಂದ್ ಗೆ ಕರೆ ನೀಡಿದೆ.ಈ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದ ಬೆನ್ನಲ್ಲೇ ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೊತ್ತಿದೆ. ಜುಲೈ 22ರಂದು ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಸಮಾಲೋಚನಾ ಸಭೆ ನೆಡೆಸಿದ ಹೋರಾಟಗಾರರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಈ ಬಗ್ಗೆ ಜನಾಂದೋಲನ ಮೂಡಿಸಲು ಹಿರಿಯ ಸಾಹಿತಿ ನಾ ಡಿಸೋಜ ಅವರ ನೇತೃತ್ವದಲ್ಲಿ ಒಕ್ಕೂಟ ಸಮಿತಿ ಅಸ್ಥಿತ್ವಕ್ಕೆ ತರಲಾಗಿದೆ. ಸಾಹಿತಿಗಳು, ಚಿಂತಕರು, ಪರಿಸರವಾದಿಗಳು, ಶಿಕ್ಷಕರು.ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ವಿದ್ಯಾರ್ಥಿಗಳು ಪಕ್ಷಾತೀತವಾಗಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಅವೈಜ್ಞಾನಿಕ ಯೋಜನೆಯ ವಿರುದ್ಧ ನಿಂತಿದ್ದಾರೆ.ಜನಾಂದೋಲನದ ಪೂರ್ವಭಾವಿ ಸಭೆಯನ್ನು ಸಾಗರ.ಹೊಸನಗರ. ತಿರ್ಥಹಳ್ಳಿ. ಶಿಕಾರಿಪುರ.ಸೊರಬದಲ್ಲಿ ನಡೆಸಲಾಗಿದೆ  ಹಾಗೂ ಹೋರಾಟದ ಕೇಂದ್ರ ಬಿಂದುವಾದ ಸಾಗರದಲ್ಲಿ ಹಲವಾರು ಸಂಘಟನೆಗಳು ವ್ಯಾಪಕವಾಗಿ ಬೆಂಬಲ ನೀಡಿವೆ. ತಾಲ್ಲೂಕಿನ ಶರಾವತಿ ಎಡದಂಡೆಯ ತುಮರಿ. ಹೊಳೆಬಾಗಿಲು. ಆವಿನಹಳ್ಳಿ. ಆನಂದಪುರದಲ್ಲಿ ಸ್ವಯಂ ಪ್ರೇರಣೆಯಿಂದ ಸಂಘಟನೆಗಳು ಬೆಂಬಲ ಸೂಚಿಸಿವೆ ಹಾಗೂ ಈ ಯೋಜನೆಯ ಸಾಧಕ ಬಾಧಕ ಮಲೆನಾಡಿನ ಮೇಲೆ ಆಗಬಹುದಾದ ಪರಿಣಾಮ ಕುರಿತ ಸಮಗ್ರ ಮಾಹಿತಿಯುಳ್ಳ ವರದಿಯೊಂದನ್ನು  ಒಕ್ಕೂಟದ ನಿಯೋಗ ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಲಿದೆ. 
ಅದೇನೇ ಇರಲಿ ಇಂತಹ ಅಪ್ರಯೋಜಕ 
ಯೋಜನೆ ಜಾರಿಗೆ ಹಣವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬ ಕೂಗು ಕೇಳಿಬಂದಿದೆ. 
ಮಲೆನಾಡಿಗೆ ಮಾರಕವಾಗಿರುವ ಯೋಜನೆ ಸಲ್ಲದು
ಬೆಂಗಳೂರಿಗೆ ನೀರು ಕೊಂಡೊಯ್ಯುಲು ಜಲಾಶಯದಲ್ಲಿ ನೀರು ಎಲ್ಲಿದೆ? ಈ ಬಗ್ಗೆ ಸರ್ಕಾರ ಗಮನ ಹರಿಸಿದೆಯೇ? ಜಲಾಶಯದಲ್ಲಿ ಎಷ್ಟುಹೂಳು ತುಂಬಿದೆ ಎಂದು ಗೊತ್ತಿದೆಯೇ? ನೀರು ಕೊಂಡೊಯ್ಯಲು ಬಳಸುವ ಮಾರ್ಗದಲ್ಲಿನ 
ರೈತರ ಭೂಮಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯದ ಕತೆ ಏನು? ಇಂತಹ ವಿಷಯಗಳ ಕುರಿತು ಸರ್ಕಾರ ಚಿಂತನೆ ನಡೆಸಿಲ್ಲ ಎಂಬುದು ಚಿಂತಕರ ಮಾತು. ಹಾಗೂ
ಯೋಜನೆಗೆ ಖರ್ಚಾಗುವ ಹಣ ನೇರವಾಗಿ ಜನರ ಮೇಲೆ ಬೀಳುತ್ತದೆ. ಇದೆಲ್ಲ ಸರ್ಕಾರಕ್ಕೆ ಅರಿವಿಲ್ಲವೇ? ಸರಿಯಾದ ರೂಪುರೇಷೆ, ಮಾಹಿತಿ ಇಟ್ಟುಕೊಳ್ಳದೆ, ಸಾಧಕ ಬಾಧಕ ನೋಡದೆ ಮಲೆನಾಡನ್ನು ಬಲಿಕೊಡುವ ಯೋಜನೆಗೆ ಅವಕಾಶ ನೀಡಲು ಸಾಧ್ಯವೇ..? 
ಹಾಗಿರುವಾಗ ಈ ಯೋಜನೆಯ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸದೆ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮದ ಬಗ್ಗೆ ಚರ್ಚಿಸದೇ 
ಸರ್ವಾಧಿಕಾರಿ ರೀತಿಯಲ್ಲಿ ಸರ್ಕಾರ ಈ ಯೋಜನೆಯನ್ನು ಹೇರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಜನಸಾಮಾನ್ಯರ ಪ್ರೆಶ್ನೆಯಾಗಿದೆ. 

ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ ಸಮಾಜವಾದಿ ಚಳವಳಿ, ಭೂಮಿ ಹಕ್ಕಿನ ಗೇಣಿ ಹೋರಾಟ, ಇತ್ತೀಚೆಗಿನ ‘ತುಂಗಾ ಉಳಿಸಿ’ ಹೋರಾಟಗಳಂತಹ ಚಳವಳಿಗಳು ನಡೆದಿದ್ದ ನೆಲದಲ್ಲಿ ಇದೀಗ ‘ಶರಾವತಿ ಉಳಿಸಿ’ ಹೋರಾಟ ಬಲವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಹ್ಯಾಶ್‌ಟ್ಯಾಗ್‌ ಬಳಸುವ ಮೂಲಕ, ಫೇಸ್‌ಬುಕ್‌  ಗುಂಪುಗಳಲ್ಲಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. 
ದಿನದಿಂದ ದಿನಕ್ಕೆ ಜನಾಂದೋಲನ ಹೋರಾಟದ ಕಿಚ್ಚು ಹಚ್ಚಿಗುತ್ತಿದ್ದು. ಈ ಬಗ್ಗೆ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಪ್ರಮುಖವಾಗಿ ಜಿಲ್ಲೆಯ  ಶಾಸಕರು ಹಾಗೂ ಸಂಸದರು  ಈ ಬಗ್ಗೆ ಧ್ವನಿ ಎತ್ತ ಬೇಕಿದೆ. ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಅಭಿವೃದ್ಧಿ. ಪರಿಸರದ ಬಗ್ಗೆ ಭಾಷಣ ಮಾಡುವ ರಾಜಕೀಯ ಮುಖಂಡರು ಇಂತಹ ಜನ ವಿರೋಧಿ ಯೋಜನೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. 


ಸುಕುಮಾರ್ ಎಂ. 
ಶಿವಮೊಗ್ಗ ಜಿಲ್ಲೆ


ಚಿತ್ರ: ಶರಾವತಿ ನದಿ 
ಚಿತ್ರ :ಶರಾವತಿ ಹಿನ್ನೀರು ಪ್ರದೇಶ
ಚಿತ್ರ : ಲಿಂಗನಮಕ್ಕಿ ಜಲಾಶಯ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

High alert in Sharavati project area. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ.

ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಯೋಜನಾ ಸಂತ್ರಸ್ತರು ಹಾಗೂ ಭೂ ಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ರಚನೆ ಅಗತ್ಯ: ಸಚಿವ ಎಸ್ ಮಧು ಬಂಗಾರಪ್ಪ