ವಯನಾಡು: ಭೂತಕಾಲದ ತಪ್ಪುಗಳಿಗೆ ವರ್ತಮಾನದ ಶಿಕ್ಷೆಯೇ...?
ಗುಡ್ಡಕುಸಿತ ಮತ್ತು ಅದನ್ನು ಹಿಂಬಾಲಿಸಿದ ದಿಢೀರ್ ಕೆಸರು ಪ್ರವಾಹದಲ್ಲಿ ಕೊಚ್ಚಿಹೋದ ವಯನಾಡ್‌ನ ಮುಂಡಕ್ಕೈ ಮತ್ತು ಚೂರಲ್‌ಮಲದ ಎಲ್ಲೆಡೆ ಕಾಣಸಿಗುವ ದೃಶ್ಯಗಳಿವು. ಸಂತ್ರಸ್ತರು, ರಕ್ಷಣಾ ಸಿಬ್ಬಂದಿ ಭೂಕುಸಿತದ ಭೀಕರತೆಯನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ.
‘ರಾತ್ರಿ 1.30ರ ವೇಳೆಗೆ ದೊಡ್ಡ ಶಬ್ದ ಕೇಳಿಸಿತು. ಎದ್ದು ಹೊರಬಂದು ನೋಡಿದರೆ, ಪ್ರವಾಹದ ನೀರು ಮನೆಯ ಮುಂದೆಯೇ ಹರಿಯುತ್ತಿತ್ತು. ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದವರು ಸಹಾಯಕ್ಕಾಗಿ ಕಿರುಚುತ್ತಿದ್ದರು, ಕೈ ಮೇಲೆ ಎತ್ತುತ್ತಿದ್ದರು. ಆದರೆ, ಪ್ರವಾಹದ ರಭಸ ಎಷ್ಟಿತ್ತೆಂದರೆ, ನೋಡ ನೋಡುತ್ತಲೇ ಎಲ್ಲವೂ ನಡೆದೇಹೋಯಿತು. ಎಲ್ಲವೂ ನಿಂತಿತು ಎಂದು ಭಾವಿಸಿ ಮತ್ತೆ ಮಲಗಿದೆವು. ನಾವಿರುವುದು ಚೂರಲ್‌ಮಲದಲ್ಲಿ. ಮತ್ತೆ ಸುಮಾರು 3.30ಕ್ಕೆ ನಮ್ಮ ಹತ್ತಿರವೇ ಏನೋ ಒಂದು ಶಬ್ದವಾದಂತೆ ಕೇಳಿಸಿತು. ಇನ್ನಷ್ಟು ಜನರು ಕೊಚ್ಚಿ ಹೋಗುತ್ತಿದ್ದರು; ಜೊತೆಗೆ ಮೃತದೇಹಗಳೂ. ನಾವು ಹೇಗೋ ಬದುಕುಳಿದೆವು’ ಎಂದು ತಮ್ಮ ಭೀಕರ ಅನುಭವವನ್ನು ಬಿಚ್ಚಿಟ್ಟರು ಕಾರ್ಮಿಕ ಜಯನ್.
‘ನನ್ನ ಹೆಂಡತಿ ಕಡೆಯ ಕುಟುಂಬದ 11 ಮಂದಿ ಕಾಣೆಯಾಗಿದ್ದಾರೆ. ಮುಂಡಕ್ಕೈನಲ್ಲಿ ಅವರ ಮನೆಗಳಿದ್ದವು. ಅವರ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇ ಎಂದು ನಾನೀಗ ಇಲ್ಲಿಯೇ ನಿಂತು ಕಾಯುತ್ತಿದ್ದೇನೆ’ ಎನ್ನುತ್ತಾರೆ ಜಯನ್. ಇವರ ರೀತಿಯಲ್ಲಿಯೇ ಹಲವರು ತಮ್ಮ ಆಪ್ತರ ಕುರಿತು ಮಾಹಿತಿ ತಿಳಿದುಕೊಳ್ಳಲು ಕಾಯುತ್ತಿದ್ದಾರೆ.
ಬದುಕುಳಿದವರು ಕಂಡಿದ್ದು...
ಕೆಸರಿನಲ್ಲಿ ಸಿಲುಕಿಕೊಂಡವರ ಕಥೆಯೇ ಬೇರೆ. ‘ಜನರ ಅಳು, ಸಹಾಯಕ್ಕಾಗಿ ಕೈ ಚಾಚುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತಿದೆ. ಅವರ ಪ್ರೀತಿಪಾತ್ರರ ಜೀವಗಳು ಅವರ ಕಣ್ಣ ಮುಂದೆಯೇ ಹೋಗಿವೆ. ಕೆಸರಲ್ಲಿ ಸಿಲುಕಿರುವ ಕೆಲವರು ತಮ್ಮ ಜೀವ ಉಳಿಸಿಕೊಳ್ಳುವ ಹೋರಾಟದಲ್ಲಿದ್ದರು’ ಎನ್ನುತ್ತಾರೆ ರಕ್ಷಣಾ ಸಿಬ್ಬಂದಿ.
ಗುಡ್ಡ ಕುಸಿತದ ಶಬ್ದ ಕೇಳಿಸಿಕೊಂಡವರು ಜೀವ ಉಳಿಸಿಕೊಳ್ಳಲು ಮನೆಮಂದಿಯನ್ನು ಕಟ್ಟಿಕೊಂಡು ಮನೆಯಿಂದ ದೂರ ಓಡಿಬಂದಿದ್ದಾರೆ. ಕೆಲವರಿಗೆ ಇದು ಸಾಧ್ಯವಾಗಿಲ್ಲ. ‘ನನ್ನ ಅಪ್ಪನನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ನಾನು ಅವರನ್ನು ಎತ್ತಿಕೊಂಡು ಕಾಡಿನ ಕಡೆಗೆ ಓಡಿದೆ. ಆದರೆ ತಂಗಿಯನ್ನು ರಕ್ಷಿಸಲಾಗಲಿಲ್ಲ. ಮನೆಯಿಂದ ಹೊರಗೆ ಓಡಿದ ನಮ್ಮಿಬ್ಬರು ಮಕ್ಕಳನ್ನು ನೀರು ಕೊಚ್ಚಿಕೊಂಡು ಹೋಯಿತು. ಆವರು ಕೂಗುತ್ತಲೇ ಇದ್ದರು, ನಾನು ಅಸಹಾಯಕನಾಗಿದ್ದೆ’ ಎಂದು ಗದ್ಗದಿತರಾದರು ಚೂರಲ್‌ಮಲದ ಪ್ರಸನ್ನ.
‘ಭೂಕುಸಿತದ ಭೀಕರತೆಯನ್ನು ಕಣ್ಣಾರೆ ಕಂಡ ಪುಟ್ಟ ಪುಟ್ಟ ಮಕ್ಕಳಿಗೆ ಈಗ ನಿದ್ದೆಯೇ ಬರುತ್ತಿಲ್ಲ. ಕೆಲವು ಗಂಟೆಗಳ ಮಟ್ಟಿಗೆ ಮಲಗಿದರೂ ಭಯದಿಂದ ಬೆಚ್ಚಿ ಎದ್ದು ಕೂರುತ್ತಿದ್ದಾರೆ’ ಎನ್ನುತ್ತಿದ್ದಾರೆ ನಿರಾಶ್ರಿತ ಶಿಬಿರಗಳಲ್ಲಿರುವ ಪೋಷಕರು
ಮೊದಲ ಬಾರಿಗೆ ಭೂಕುಸಿತ ಸಂಭವಿಸಿದಾಗ ಕೆಲವರು ಬದುಕುಳಿದು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದರು. ಆದರೆ, ಪ್ರವಾಹದ ತೀವ್ರತೆಗೆ ಅವರು ಅದರಲ್ಲಿಯೇ ಕೊಚ್ಚಿಹೋದರು. ಅವರ ದೇಹದ ಭಾಗಗಳು ಈಗ ಸಿಗುತ್ತಿವೆ. ಕೆಲವರ ಕಾಲು, ಕೆಲವರ ಕೈ...’ ಎನ್ನುತ್ತಾರೆ ಅರುಣ್ ದೇವ್. ವೈದ್ಯಕೀಯ ನೆರವು ನೀಡುತ್ತಿರುವ ತಂಡದೊಂದಿಗೆ ಅರುಣ್ ಕೆಲಸ ಮಾಡುತ್ತಿದ್ದಾರೆ
ಮೃತರ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದುಕೊಂಡವರ ಹೆಸರು ಕೂಗುತ್ತಾ, ಅಳುತ್ತಾ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ
ಗಾಯಾಳುಗಳ ತುರ್ತು ಚಿಕಿತ್ಸೆಗೆ ಆಮ್ಲಜನಕ ಸೌಲಭ್ಯವುಳ್ಳ ಆಂಬುಲೆನ್ಸ್ ಸೇರಿ ವೈದ್ಯಕೀಯ ಕೇಂದ್ರ ಮತ್ತು ಕಂಟ್ರೋಲ್ ರೂಂ ಅನ್ನು ಚೂರಲ್ ಮಲದಲ್ಲಿ ಸ್ಥಾಪಿಸಲು ಕೇರಳ ನಿರ್ಧರಿಸಿದೆ.
ವಿದ್ಯಾರ್ಥಿಗಳ ಸೇವೆ
‘ಇವರೆಲ್ಲಾ ನಮ್ಮ ಜೊತೆಯೇ ಇದ್ದವರು. ಇಲ್ಲಿ ನಮ್ಮ ಸ್ನೇಹಿತರಿದ್ದಾರೆ, ಅವರ ಕುಟುಂಬಗಳು ಇವೆ. ನಮ್ಮ ಕೈಯಲ್ಲಿ ದೊಡ್ಡ ದೊಡ್ಡ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ, ಅವರಿಗಾಗಿ ನಮ್ಮ ಕೈಲಾದ ಸಣ್ಣ ಸಹಾಯ ಮಾಡುತ್ತಿದ್ದೇವೆ’ ಎನ್ನುತ್ತಾ ಮೇಪ್ಪಾಡಿಯ ಸರ್ಕಾರಿ ಶಾಲೆಯಾದ ಜಿಎಚ್‌ಎಸ್‌ಎಸ್ ಪ್ರೌಢಶಾಲೆಯ ಮಕ್ಕಳು ನಿರಾಶ್ರಿತರಿಗಾಗಿ ವಿವಿಧೆಡೆಯಿಂದ ಬಂದಿದ್ದ ಬಟ್ಟೆಗಳನ್ನು ಜೋಡಿಸಿಟ್ಟರು.
ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಕೇರಳ
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಕಾಪಾಡುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ನೇಮಿಸಿದ್ದ ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ 2011ರಲ್ಲಿ ಮತ್ತು ಪ್ರೊ.ಕಸ್ತೂರಿ ರಂಗನ್ ನೇತೃತ್ವದ ಮತ್ತೊಂದು ಸಮಿತಿ 2013ರಲ್ಲಿ ಸಲ್ಲಿಸಿದ್ದ ವರದಿಗಳನ್ನು ಕೇರಳ ಸರ್ಕಾರ ವಿರೋಧಿಸಿತ್ತು.
ಕೇರಳದ 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿರುವ 123 ಹಳ್ಳಿಗಳ ವ್ಯಾಪ್ತಿಯ 13,108 ಚದರ ಕಿ.ಮೀ ಭೂಪ್ರದೇಶವನ್ನು ಪರಿಸರ ಸೂಕ್ಷ್ಮ ಭೂಪ್ರದೇಶ ಎಂದು ಪರಿಗಣಿಸಬೇಕು ಎಂಬುದಾಗಿ ಕಸ್ತೂರಿ ರಂಗನ್ ವರದಿ ಶಿಫಾರಸು ಮಾಡಿತ್ತು. 123 ಹಳ್ಳಿಗಳ ಪೈಕಿ 60 ಹಳ್ಳಿಗಳು ಇಡುಕ್ಕಿ ಮತ್ತು ವಯನಾಡ್ ಜಿಲ್ಲೆಗಳಿಗೆ ಸೇರಿವೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕ್ವಾರಿ, ಮರ ಕಡಿಯುವುದು, ಕೈಗಾರಿಕೆ ಸ್ಥಾಪನೆ ಮತ್ತು ಕಟ್ಟಡ ನಿರ್ಮಾಣದಂಥ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿ ಕೇಂದ್ರ ಸರ್ಕಾರವು ನವೆಂಬರ್ 2013ರಲ್ಲಿ ಎರಡು ಆದೇಶಗಳನ್ನು ಜಾರಿ ಮಾಡಿತ್ತು. ಅದನ್ನು ವಿರೋಧಿಸಿ ‘ಪಶ್ಚಿಮ ಘಟ್ಟ ಜನ ಸಂರಕ್ಷಣಾ ಸಮಿತಿ’ಯ ಅಡಿ ಕೇರಳದಲ್ಲಿ ಪ್ರತಿಭಟನೆಗಳು ಆರಂಭವಾದವು.
ವ್ಯಾಪಕ ಪ್ರತಿಭಟನೆಗಳ ಕಾರಣ, ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶವನ್ನು ಕಡಿಮೆ ಮಾಡಬೇಕು ಎಂದು ಕೇರಳ, ಕೇಂದ್ರ ಸರ್ಕಾರವನ್ನು ಕೋರಿತು. ಅದರ ಮನವಿಗೆ ಸ್ಪಂದಿಸಿದ ಕೇಂದ್ರವು, ಮೊದಲಿನ 13,108 ಚದರ ಕಿ.ಮೀ ವ್ಯಾಪ್ತಿಯಲ್ಲಿ 3100 ಚ.ಕಿ.ಮೀ ಪ್ರದೇಶವನ್ನು ಕೈಬಿಟ್ಟು, 9,994 ಚ.ಕಿ.ಮೀ ಭೂಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿತು. ಅದರಲ್ಲಿ, 9,107 ಚ.ಕಿ.ಮೀ ಅರಣ್ಯ ಪ್ರದೇಶವಾಗಿದ್ದರೆ, 887 ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಇದುವರೆಗೆ ಐದು ಬಾರಿ (2014, 2015, 2017, 2018 ಮತ್ತು 2022) ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಗಳನ್ನು ಆಹ್ವಾನಿಸಿದೆ. ಪ್ರತಿ ಬಾರಿಯೂ ಪ್ರತಿಭಟನೆ, ವಿರೋಧ ರಾಜಕೀಯ ಮೇಲಾಟಗಳು ನಡೆದು ವರದಿ ಜಾರಿ ವಿಚಾರ ಹಾಗೆಯೇ ಉಳಿಯುತ್ತಿದೆ.
ವರದಿ ಕುರಿತು ಕೇರಳದ ವಾದವೇನು?
ಪರಿಸರ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿರುವ ಭೂಭಾಗಗಳಲ್ಲಿ ದಟ್ಟ ಜನವಸತಿ ಇದೆ
l ವರದಿ ಜಾರಿಯಾದರೆ, 123 ಹಳ್ಳಿಗಳ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡಿ, ಪುನರ್ವಸತಿ ಕಲ್ಪಿಸಬೇಕಾಗುತ್ತದೆ
l ವರದಿಯು ರೈತ ವಿರೋಧಿಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ
l ಹೈನುಗಾರಿಕೆ, ಮೀನು ಸಾಕಾಣಿಕೆ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ
l ವರದಿ ಜಾರಿಯಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕು ಉಂಟಾಗಲಿದೆ
l ಪಶ್ಚಿಮ ಘಟ್ಟಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ
ಪೂತ್ತುಮಲ ಭೂಕುಸಿತ ಮರೆಯುವ ಮುನ್ನವೇ..
ಪೂತ್ತುಮಲ ಎನ್ನುವುದು ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಒಂದು ಹಳ್ಳಿ. 2019ರ ಆಗಸ್ಟ್ 8ರಂದು ಮುಂಗಾರು ಸಂದರ್ಭದಲ್ಲಿ ಪೂತ್ತುಮಲ ಗ್ರಾಮದ ಸುತ್ತಮತ್ತ 24 ಗಂಟೆಗಳಲ್ಲಿ 50 ಸೆಂ.ಮೀ. ಮಳೆ ಸುರಿದಿತ್ತು. ಅದರ ಪರಿಣಾಮವಾಗಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಅದು ಎಷ್ಟು ತೀವ್ರವಾಗಿತ್ತು ಎಂದರೆ, 20 ಹೆಕ್ಟೇರ್‌ನಷ್ಟು ಭೂಮಿಯು 2 ಕಿಮೀನಷ್ಟು ದೂರಕ್ಕೆ ಸರಿದಿತ್ತು. 100 ಎಕರೆಯಷ್ಟು ಟೀ ತೋಟ ಕೊಚ್ಚಿಹೋಗಿತ್ತು. ವಯನಾಡ್ ಜಿಲ್ಲೆಯ ಸುಮಾರು 25,000 ಹೆಕ್ಟೇರ್ ಪ್ರದೇಶದಲ್ಲಿ ಫಲವತ್ತಾದ ಭೂಮಿಯ ಎರಡು ಸೆಂಟಿಮೀಟರ್‌ನಷ್ಟು ಮೇಲ್ಮೈ ಕೊಚ್ಚಿಕೊಂಡು ಹೋಗಿತ್ತು. 17 ಜನರು ಮೃತಪಟ್ಟಿದ್ದರು.
ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರವನ್ನು ಒಳಗೊಂಡಿರುವ ವಯನಾಡ್‌ನ 102.6 ಚದರ ಕಿ.ಮೀ. ಪ್ರದೇಶವು ತೀವ್ರ ಭೂಕುಸಿತದ ಅಪಾಯದ ಭೂಭಾಗವಾಗಿದ್ದರೆ, 196.6 ಚದರ ಕಿ.ಮೀ. ಪ್ರದೇಶವು ಮಧ್ಯಮ ಶ್ರೇಣಿಯ ಭೂಕುಸಿತದ ಅಪಾಯದ ಭೂಭಾಗ ವಾಗಿದೆ. ಹವಾಮಾನ ಬದಲಾವಣೆಯಿಂದ ಭೂಕುಸಿತದ ಅಪಾಯ ಹೆಚ್ಚಾಗಿರುವ ಇರುವ ಭೂಪ್ರದೇಶ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದರು.
ಎಲ್ಲ ಜಿಲ್ಲೆಗಳಲ್ಲಿ ಭೂಕುಸಿತದ ಅಪಾಯ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಂಗಸಂಸ್ಥೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರವು (ಎನ್‌ಆರ್‌ಎಸ್‌ಸಿ) ದೂರ ಸಂವೇದಿ ದತ್ತಾಂಶ ಆಧರಿಸಿ, ಕಳೆದ ವರ್ಷದ ಫೆಬ್ರುವರಿಯಲ್ಲಿ ದೇಶದ ಭೂಕುಸಿತದ ನಕ್ಷೆಯನ್ನು (Landslide Atlas of India) ಸಿದ್ಧಪಡಿಸಿದೆ.
ಹಿಮಾಲಯ, ಪಶ್ಚಿಮ ಘಟ್ಟಗಳು ಸೇರಿದಂತೆ ದೇಶದ 17 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿರುವ ಮತ್ತು ಭೂಕುಸಿತದ ಸಾಧ್ಯತೆ ಇರುವ ನಿರ್ದಿಷ್ಟ ಜಿಲ್ಲೆ, ಸ್ಥಳಗಳನ್ನು ಈ ನಕ್ಷೆಯಲ್ಲಿ ಗುರುತಿಸಲಾಗಿದೆ.
ಭೂಕುಸಿತದ ಅಪಾಯ ಎದುರಿಸುತ್ತಿರುವ 147 ಜಿಲ್ಲೆಗಳನ್ನು ಪಟ್ಟಿ ಮಾಡಲಾಗಿದ್ದು, ಸಾಮಾಜಿಕ–ಆರ್ಥಿಕ ಮಾನದಂಡದ ಆಧಾರದಲ್ಲಿ ರ‍್ಯಾಂಕಿಂಗ್ ಕೂಡ ನೀಡಲಾಗಿದೆ.
ಈ ಪಟ್ಟಿಯಲ್ಲಿ ಕೇರಳದ ಎಲ್ಲ ಜಿಲ್ಲೆಗಳೂ ಸ್ಥಾನ ಪಡೆದಿವೆ. ರಾಜ್ಯದ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳು ಮೊದಲ 50 ರ‍್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದಿವೆ. 20ರ ಒಳಗಡೆ ಏಳು ಜಿಲ್ಲೆಗಳಿವೆ. ಈಗ ಮಹಾ ದುರಂತಕ್ಕೆ ಸಾಕ್ಷಿಯಾಗಿರುವ ವಯನಾಡ್ 13ನೇ ಸ್ಥಾನದಲ್ಲಿದೆ. ಉತ್ತರಾಖಂಡದ ರುದ್ರಪ್ರಯಾಗ್ ಮೊದಲ ಸ್ಥಾನದಲ್ಲಿದೆ. ಅದೇ ರಾಜ್ಯದ ಟಿಹರಿ ಗಢವಾಲ್ ಎರಡನೇ ಸ್ಥಾನದಲ್ಲಿದೆ.
ಕರ್ನಾಟಕದ ಕೊಡಗು ಜಿಲ್ಲೆ 12ನೇ ಸ್ಥಾನದಲ್ಲಿದೆ. ಹಾಸನ ಮತ್ತು ದಕ್ಷಿಣ ಕನ್ನಡ ಕ್ರಮವಾಗಿ 53 ಮತ್ತು 54ನೇ ಸ್ಥಾನದಲ್ಲಿವೆ.
ಪ್ರವಾಹದ ದುಃಸ್ವಪ್ನ
2018ರ ಆಗಸ್ಟ್ 14ರಿಂದ 19ರ ನಡುವೆ ಕೇರಳದಲ್ಲಿ ಸುರಿದ ಭಾರಿ ಮಳೆಗೆ 14 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಅಪಾರ ಸಾವು ನೋವು ಉಂಟಾಗಿತ್ತು. 480ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಆಸ್ತಿಗೆ ಭಾರಿ ಹಾನಿಯಾಗಿತ್ತು. 1924ರಲ್ಲಿ ಉಂಟಾಗಿದ್ದ ನೆರೆಯ ನಂತರ ಆ ಮಟ್ಟಿಗಿನ ಭೀಕರ ಪ್ರವಾಹ ಸ್ಥಿತಿಯನ್ನು ಕೇರಳ ಕಂಡಿರಲಿಲ್ಲ.
ಆಗಸ್ಟ್ ಮೊದಲ ಆರಂಭದಲ್ಲಿ ಶುರುವಾದ ಮಳೆ ಎರಡನೇ ವಾರದಲ್ಲಿ ತೀವ್ರಗೊಂಡಿತ್ತು. ಆಗಸ್ಟ್ 1ರಿಂದ 19ರ ನಡುವೆ ರಾಜ್ಯದಲ್ಲಿ 75.86 ಸೆಂ.ಮೀ ಮಳೆಯಾಗಿತ್ತು.
ಇಡುಕ್ಕಿ ಜಲಾಶಯ ಸೇರಿದಂತೆ ರಾಜ್ಯದ ಎಲ್ಲ ಜಲಾಶಯಗಳಿಂದ ಅನಿವಾರ್ಯವಾಗಿ ಹೆಚ್ಚು ನೀರು ಹೊರಗೆ ಬಿಡಬೇಕಾಯಿತು. ಇದರೊಂದಿಗೆ ಮಳೆಯೂ ತೀವ್ರವಾಗಿದ್ದರಿಂದ ನೆರೆ ಸೃಷ್ಟಿಯಾಗಿ, ಭೂಕುಸಿತ ಸಂಭವಿಸಿ ಸಾವಿರಾರು ಜನ ಮನೆಗಳನ್ನು ಕಳೆದುಕೊಳ್ಳಬೇಕಾಯಿತು. ಕೇರಳದ ಜನರನ್ನು ಈ ಪ್ರವಾಹ ದುಃಸ್ವಪ್ನವಾಗಿ ಇನ್ನೂ ಕಾಡುತ್ತಿದೆ.
ಆಧಾರ: ಇಸ್ರೊದ ಎನ್‌ಆರ್‌ಎಸ್‌ಸಿ ಭೂಕುಸಿತ ನಕ್ಷೆ ವರದಿ, 2018ರ ಕೇರಳ ಪ್ರವಾಹ ಕುರಿತ ಕೇಂದ್ರ ಜಲ ಆಯೋಗದ ವರದಿ ಮತ್ತು ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಡೆವೆಲಪ್‌ಮೆಂಟ್ ಸ್ಟಡೀಸ್, ಕೇರಳ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ವರದಿ.
ಪೂರಕ ಮಾಹಿತಿ: ಭವಿತ್ ಉಳ್ಳಾಲ. ವಸಂತ್ ಸಲ್ಯಾನ್
ಆಧಾರ: ಪತ್ರಿಕಾ ವರದಿ. India Today. ಪಿಟಿಐ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ