ನಿಷೇಧದ ನಂತರವೂ ನಿಲ್ಲದ ಕೃತಕ ಬಣ್ಣ ಬಳಕೆ
ಮಲೆನಾಡಿನಲ್ಲಿ ಗೋಬಿ, ಕಬಾಬ್‌ಗೆ ಬಣ್ಣ ಬಳಕೆಗೆ ಬೀಳದ ಕಡಿವಾಣ.
ಶಿವಮೊಗ್ಗ :
ಗೋಬಿ ಮಂಚೂರಿ, ಕಬಾಬ್ ಖಾದ್ಯಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ 5 ತಿಂಗಳು ಕಳೆಯುತ್ತಾ ಬಂದರೂ ಜಿಲ್ಲೆಯಲ್ಲಿ ಕೃತಕ ಬಣ್ಣ ಬಳಕೆ ನಿಂತಿಲ್ಲ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್ಎಐ) ಅಧಿಕಾರಿಗಳು ತಡವಾಗಿ ಎಚ್ಚೆತ್ತುಕೊಂಡಿದ್ದಾರೆ. ಹಲವು ದಿನಗಳಿಂದ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಸ್ತೆ ಪಕ್ಕದಲ್ಲಿನ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಈ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ಕೃತಕ ಬಣ್ಣ ಬಳಸುವುದನ್ನು ತಡೆದಿಲ್ಲ. ಇದರ ಅಡ್ಡ ಪರಿಣಾಮದ ಅರಿಯದ ಜನ ಕಬಾಬ್, ಗೋಬಿ ಮಂಚೂರಿ ಸೇವನೆಯಲ್ಲಿ ನಿರತರಾಗಿದ್ದಾರೆ.
ಮಾರ್ಚ್ 11ರಂದು ಗೋಬಿ ಮಂಚೂರಿ, ಕಬಾಬ್, ಪಾನಿಪೂರಿ ಖಾದ್ಯಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಸರ್ಕಾರ ಆದೇಶಿಸಿತ್ತು. ಬಳಸುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ನಗರದಿಂದಲೂ ಕಬಾಬ್ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕೃತಕ ಬಣ್ಣ ಬಳಸಿದ ಕಬಾಬ್ ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿತ್ತು. ಸರ್ಕಾರ ಆದೇಶ ನೀಡಿ ನಾಲ್ಕು ತಿಂಗಳು ಕಳೆದ ನಂತರ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಶವರ್ಮಾ ಸುರಕ್ಷಿತ–
ಬಳಕೆ ಬೇಡ: ನಗರದ ವಿವಿಧ ಕಡೆಗಳಲ್ಲಿ ತಯಾರಿಸುವ ಶವರ್ಮಾ ಆಹಾರದ 6 ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯದಲ್ಲಿ ಈಚೆಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶವರ್ಮಾ ಮಾದರಿಯಲ್ಲಿ ಯಾವುದೇ ಕೆಮಿಕಲ್ ಅಂಶಗಳು ಇಲ್ಲ ಎಂಬುವುದು ವರದಿಯಿಂದ ದೃಢಪಟ್ಟಿದೆ. ಆದರೂ ಶವರ್ಮಾ ಸೇವಿಸುವವರು ಎಚ್ಚರಿಕೆಯಿಂದ ಇರಬೇಕು ಎಂದು ಆಹಾರ ಗುಣಮಟ್ಟದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಗರದಲ್ಲಿಯೂ ಕೆಲವು ಕಡೆ ಮಳಿಗೆಗಳಲ್ಲಿ ಶವರ್ಮಾ ತಯಾರಿಸಲಾಗುತ್ತಿದೆ. ಆದರೆ ಇವೆಲ್ಲ ಆಹಾರ ಗುಣಮಟ್ಟದ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ಬೇರೆ ಯಾವ ಮಳಿಗೆಗಳೂ ಎಫ್‌ಎಸ್‌ಎಸ್‌ಎಐನಲ್ಲಿ ನೋಂದಣಿಯಾಗಿಲ್ಲ. ಇದರಿಂದ ನಗರದ ಜನರು ಶವರ್ಮಾ ಸೇವಿಸುವ ಮುನ್ನ ಒಮ್ಮೆ ಯೋಚಿಸಬೇಕಿದೆ.
‘ಜನರ ಆರೋಗ್ಯದ ಮೇಲೆ ತೀವ್ರತರ ವಾದ ಪರಿಣಾಮ ಬೀರುವ ಕೃತಕ ಬಣ್ಣ ಬಳಕೆ ಯನ್ನು ಕಟ್ಟುನಿಟ್ಟಾಗಿ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಿಷೇಧಿತ ಬಣ್ಣ ಬಳಸು ವವರ ವಿರುದ್ಧ ಯಾವುದೇ ಮುಲಾಜು ನೋಡದೆ ಶಿಸ್ತು ಕ್ರಮ ಜರುಗಿಸಬೇಕು. ಆಹಾರ ತಯಾರಕರು ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಪ್ರಮಾಣದಲ್ಲಿ ಜಾಗೃತಿ ಮೂಡಿಸ ಬೇಕು. ಆಹಾರದ ಗುಣಮಟ್ಟ ಕಾಪಾಡಲು ಕಾನೂನಿನ ಅಸ್ತ್ರ ಬಳಕೆ ಮಾಡಬೇಕು’ ಎಂದು ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಕಿರಣ್ ಕುಮಾರ್ ಕೆ ಎಂ ಒತ್ತಾಯಿಸಿದ್ದಾರೆ.
ತಿಂಗಳ ಹಿಂದೆ ನಗರದ ಮಾಂಸಹಾರಿ ಫುಡ್ ಕೋರ್ಟ್ (Food Court) ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಮಳಿಗಗಳಲ್ಲಿ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟ ಪರಿಶೀಲಿಸಿದರು. ಹಲವು ಮಳಿಗೆಗಳಿಗೆ ನೊಟೀಸ್ ಜಾರಿ ಮಾಡಿದ್ದರು. ಗೋಪಿ ಸರ್ಕಲ್ ಸಮೀಪದಲ್ಲಿರುವ ಮಾಂಸಹಾರ ಫುಡ್ ಕೋರ್ಟ್ ಮೇಲೆ ದಳಿ ನಡೆಸಲಾಗಿದೆ. ಈ ಸಂದರ್ಭ ಸ್ವಚ್ಛತೆ ಕಾಪಾಡದಿರುವುದು, ಆರೋಗ್ಯಕ್ಕೆ ಹಾನಿಕಾರಕ ಬಣ್ಣವನ್ನು ಆಹಾರಕ್ಕೆ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಇಂತಹ ಮಳಿಗೆಗಳ ಮಾಲೀಕರಿಗೆ ನೊಟೀಸ್ ನೀಡಿದ್ದರು.
ಕಾನೂನು ಕ್ರಮ:
ಜಿಲ್ಲೆಯಾದ್ಯಂತ ಕೆಮಿಕಲ್ ಮಿಶ್ರಿತ ಆಹಾರ ಸೇವಿಸದಂತೆ, ಮಾರಾಟ ಮಾಡದಂತೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲ ಅಂಗಡಿ ಮಳಿಗೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಸೂಚನೆ ನಂತರ ಕೂಡ ಕೃತಕ ಬಣ್ಣ ಬಳಸುವುದು ಗಮನಕ್ಕೆ ಬಂದರೆ ದಂಡ ವಿಧಿಸಿ, ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
All Rights Reserved by
Sukumar smk
smkformedia@gmail.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ