ಅಂತರರಾಷ್ಟ್ರೀಯ ಹುಲಿ ದಿನ ಇಂದು (ಜುಲೈ 29)
ಹುಲಿಗೆ ಉರುಳಾಗದಿರಲಿ ಕಳ್ಳಬೇಟೆ, ಅಕ್ರಮ ಸಾಗಣೆ, ಆವಾಸ ನಷ್ಟ
ಶಿವಮೊಗ್ಗ:
ಕಾನನಗಳ ಸರ್ವಾಂಗ ಸುಂದರ ಜೀವಿ ಹುಲಿ ರಾಷ್ಟ್ರೀಯ ಪ್ರಾಣಿಯೂ ಹೌದು. ನಮ್ಮ ಸುತ್ತಮುತ್ತಲ ದೈವಗಳಿಗೂ ಹುಲಿಯೇ ವಾಹನ. ಅಮೋಘ ನಡಿಗೆ ಮತ್ತು ಬೇಟೆಯ ವೈವಿಧ್ಯಮಯ ಶೈಲಿಯ ಕಾರಣದಿಂದ ಚಾರಿತ್ರಿಕ ಮತ್ತು ಐತಿಹಾಸಿಕವಾಗಿ ಗುರುತಿಸಿಕೊಳ್ಳುವ ವ್ಯಾಘ್ರಗಳಿಗೆ ಸಾಂಸ್ಕೃತಿಕ ಮೆರುಗು ಸೇರಿಕೊಂಡಿದೆ. ಹುಲಿಗಳ ಪ್ರಭೇದ ಅವಸಾನದ ಅಂಚಿನಲ್ಲಿರುವ ಈ ಹೊತ್ತಿನಲ್ಲಿ ವನ್ಯಜೀವಿ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಸ್ಥೆಗಳು ಹುಲಿ ಉಳಿಸುವ ಅಭಿಯಾನಕ್ಕೆ ಮುಂದಾಗಿವೆ.
ಪಶ್ಚಿಮಘಟ್ಟದಲ್ಲಿ ಸಾಕಾಡಿನಿಂದ ಆವೃತವಾಗಿದೆ. ಇಲ್ಲಿನ ನಿಸರ್ಗ ಹುಲಿಗಳ ವಂಶಾಭಿವೃದ್ಧಿಗೆ ವರವಾಗಿದೆ. ಆದರೆ, ಬ್ರಿಟಿಷರ ಆಡಳಿತ ದಲ್ಲಿ ರಾಜರ ಮತ್ತು ಇಂಗ್ಲಿಷ್ ಅಧಿಕಾರಿಗಳ ಮೋಜು ಮಸ್ತಿಗೆ ಬಹಳಷ್ಟು ಸಂಖ್ಯೆಯ ಹುಲಿಗಳು ಬಲಿಯಾ ದವು. ಬಹಳಷ್ಟು ರೋಗ, ಕಳ್ಳದಂಧೆಗೆ ಅಳಿದವು. ಸ್ವಾತಂತ್ರ್ಯ ನಂತರ 1973ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಹುಲಿ ಸಂರಕ್ಷಣಾ ಯೋಜನೆ’ ಹುಲಿ ಸಂತತಿ ರಕ್ಷಣೆಗೆ ಮೊದಲಾಯಿತು. ಹುಲಿಗಳ ಜೀವ ಸಂಕುಲ ಹೆಚ್ಚಳದೊಂದಿಗೆ ಅರಣ್ಯ ವನ ವಿಸ್ತಾರವೂ ಪಸರಿಸಿತು.
ಇಂದು ಪಶ್ಚಿಮ ಘಟ್ಟದಲ್ಲಿ ವನ್ಯಜೀವಿಗಳ ಸಂಖ್ಯೆಯೂ ಹೇರಳವಾಗಿದ್ದು ಹುಲಿ ಆವಾಸದಲ್ಲಿ ಹೆಚ್ಚಳವಾಗಿದೆ. ವರ್ಷದಿಂದ ಈಚೆಗೆ ಮಾನವ ವನ್ಯಜೀವಿ ಸಂಘರ್ಷ ಮತ್ತು ಬೇಟೆಯ ಘಟನೆಗಳು ಕಡಿಮೆಯಾಗಿವೆ. ಇದರಿಂದ ವನ್ಯಜೀವಿ ಅಪರಾಧ ಪ್ರಕರಣಗಳು ಗಣನೀಯವಾಗಿ ತಗ್ಗಿದೆ. ರಕ್ಷಿತ ಪ್ರದೇಶಗಳಲ್ಲಿ ಕೈಗೊಂಡ ಕಠಿಣ ಕ್ರಮ, ಕಾಡಂಚಿನ ಜನರ ಸುಸ್ಥಿರ ಜೀವನೋಪಾಯ ವಿಧಾನಗಳಿಂದ ಹುಲಿ ಜೀವಾವರ ಉಳಿಸುವ ದೆಸೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಬಹುದು.
ಭಾರತ ವ್ಯಾಘ್ರಗಳ ಪಾಲಿಗೆ ಮಹತ್ವದ ನೆಲೆ. ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್. ಹುಲಿಗಳು ಅಳಿವಿನಂಚಿನ ಪ್ರಾಣಿ ವರ್ಗದಲ್ಲಿದ್ದು ವಿಶ್ವದಲ್ಲಿನ 6 ಉಪಜಾತಿಗಳಲ್ಲಿ ಬಂಗಾಳದ ಹುಲಿಯೂ ಸೇರಿದೆ. ಪ್ರಪಂಚದಲ್ಲಿ ಹುಲಿಗಳ ಸಂಖ್ಯೆ ಸುಮಾರು 5,574. ಹುಲಿ ಗಣತಿಯಲ್ಲಿ ಭಾರತದಲ್ಲಿ ಶೇ 75 ಅಂದರೆ 3,682 ಹುಲಿಗಳನ್ನು ಗುರುತಿಸಲಾಗಿದೆ. ಆದರೆ, ವಿಶ್ವ ವನ್ಯಜೀವಿ ನಿಧಿಯ ಪ್ರಕಾರ ದತ್ತಾಂಶ ನೀಡುವ ಮಾಹಿತಿಗಳಲ್ಲಿ ವ್ಯತ್ಯಾಸವಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ನವೀನ್ ಜಗಲಿ ತಿಳಿಸಿದರು.
ಶರಾವತಿ ವನ್ಯಜೀವಿ ವಿಭಾಗದಲ್ಲಿ 10 ಹುಲಿಗಳಿಗೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ ಆದರೆ ವನ್ಯಜೀವಿ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. ಇಲ್ಲಿಗೆ ಹೊಂದಿಕೊಂಡ ಮಡೆನೂರು ಮತ್ತು ಶರಾವತಿ ಸಿಂಗಳೀಕ ಅಭಯಾರಣ್ಯ ವಿಶ್ವಮಾನ್ಯವಾಗಿವೆ.
ಭಾರತದಲ್ಲಿ 1973ರಲ್ಲಿ ಹುಲಿ ಯೋಜನೆ ಜಾರಿಗೆ ತಂದು ಅವುಗಳ ಮೂಲ ನೆಲೆ ಗುರುತಿಸಲಾಯಿತು. 53 ಹುಲಿ ರಕ್ಷಿತ ತಾಣಗಳು, 71 ಸಾವಿರ ಚದರ ಕಿ.ಮೀನಲ್ಲಿ ವಿಸ್ತರಿಸಿದೆ. ಮಧ್ಯಪ್ರದೇಶ (526), ಕರ್ನಾಟಕ (524), ಉತ್ತರಾಖಂಡ್ (442) ಹುಲಿಗಳಿಗೆ ಆಸರೆ ಒದಗಿಸಿವೆ. ಸ್ಥಳೀಯ ಸಮುದಾಯಗಳ ಸಹಕಾರದಲ್ಲಿ ಹುಲಿ ಸಫಾರಿಗೆ ಆದ್ಯತೆ ನೀಡಲಾಗಿದೆ. ಟೈಗರ್ ಪ್ರಾಜೆಕ್ಟ್ ಮೂಲಕ ಹುಲಿ ಸಂಶೋಧಕರಿಗೂ ಅವಕಾಶ ಸಿಕ್ಕಿದೆ.
ಜಗತ್ತಿನಲ್ಲಿ ಇರುವ ಹುಲಿಗಳ ಪೈಕಿ ಶೇ 80ರಷ್ಟು ಭಾರತದ ಕಾಡುಗಳಲ್ಲಿವೆ. ಭಾರತದ ವಿವಿಧ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ 2,967 ಹುಲಿಗಳಿವೆ ಎಂದು ‘ಸ್ಟೇಟಸ್ ಆಫ್ ಟೈಗರ್ಸ್: ಕೊ ಪ್ರಿಡೇಟರ್ಸ್ ಎಂಡ್ ಪ್ರೇ ಇನ್ ಇಂಡಿಯಾ’ ಎಂಬ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. ಹುಲಿಗಳ ಸಂಖ್ಯೆ ಏರಿಕೆ ಮತ್ತು ಸಂರಕ್ಷಣೆಯಲ್ಲಿ ಬಹುದೊಡ್ಡ ಯಶಸ್ಸು ದಕ್ಕಿದೆ. ಈ ಯಶಸ್ಸು ಅಭೂತಪೂರ್ವವಾದುದು. ಯಾಕೆಂದರೆ, 2006ರ ಹುಲಿಗಣತಿ ಪ್ರಕಾರ ದೇಶದಲ್ಲಿ ಇದ್ದ ಹುಲಿಗಳ ಸಂಖ್ಯೆ 1,411. 2010 ಮತ್ತು 2014ರ ಗಣತಿಯಲ್ಲಿ ಇದು ಕ್ರಮವಾಗಿ 1,706 ಮತ್ತು 2,226ಕ್ಕೆ ಏರಿಕೆಯಾಯಿತು.
ಹಾಗಿದ್ದರೂ ಹುಲಿಗಳ ಸಂತತಿ ವೃದ್ಧಿಯ ದರವನ್ನು ಹೀಗೆಯೇ ಕಾಯ್ದುಕೊಳ್ಳುವುದು ಸುಲಭವೇನಲ್ಲ. ಸಂರಕ್ಷಣೆಗೆ ಹಲವು ಸವಾಲುಗಳು ಇವೆ. ಹುಲಿ ಸಂಚಾರ ಮಾರ್ಗಗಳ (ಟೈಗರ್ ಕಾರಿಡಾರ್) ಒತ್ತುವರಿ ಇಲ್ಲಿನ ಬಹುದೊಡ್ಡ ಸಮಸ್ಯೆ. ಪಶ್ಚಿಮ ಬಂಗಾಳದ ಸುಂದರ್‌ಬನ್‌ನಲ್ಲಿ 88 ಹುಲಿಗಳಿವೆ. ಇದು ಜೌಗು ಪ್ರದೇಶದಲ್ಲಿ ಇರುವ ಏಕೈಕ ಹುಲಿ ಆವಾಸಸ್ಥಾನ. ಈ ಪ್ರದೇಶದಿಂದ ಹೊರಗಿನ ಕಾಡುಗಳಿಗೆ ಹೋಗಲು ಹುಲಿಗಳಿಗೆ ಕಾರಿಡಾರ್‌ಗಳೇ ಇಲ್ಲ. ಹಾಗಾಗಿ, ಹುಲಿಗಳ ಸಂಖ್ಯೆ ಸೀಮಿತ ಕಾಡು ಪ್ರದೇಶದಲ್ಲಿ ಕೇಂದ್ರೀಕೃತವಾಗುತ್ತದೆ. ಮರಿ ಹುಲಿಗಳು ಯೌವನಕ್ಕೆ ಬಂದಾಗ ಸಂಘರ್ಷ ಏರ್ಪಡುತ್ತದೆ. ಈ ಸಂಘರ್ಷದಲ್ಲಿ ಸೋತ ಹುಲಿಯು ಕಾಡಿನ ಅಂಚಿಗೆ ಹೋಗಬೇಕಾಗುತ್ತದೆ. ಕಾಡಿನ ಅಂಚಿನಲ್ಲಿ ಬಲಿ ಪ್ರಾಣಿಗಳ (ಹುಲಿಗೆ ಆಹಾರವಾಗುವ ಪ್ರಾಣಿಗಳು) ಸಂಖ್ಯೆ ಕಡಿಮೆ ಇರುತ್ತದೆ. ಜತೆಗೆ, ಕಾಡಿನ ಅಂಚಿನಲ್ಲಿ ವಾಸವಿರುವ ಜನರು ಇಲ್ಲಿ ಜಾನುವಾರುಗಳನ್ನು ಮೇಯಿಸುತ್ತಾರೆ. ಬಲಿ ಪ್ರಾಣಿ ಸಿಗದ ಹುಲಿಯು ಜಾನುವಾರುಗಳನ್ನು ಹಿಡಿದು ತಿನ್ನಲಾರಂಭಿಸುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮನುಷ್ಯನ ಮೇಲೆಯೂ ಹುಲಿ ದಾಳಿ ಮಾಡಬಹುದು. ಇಂತಹ ಸಂದರ್ಭದಲ್ಲಿ ಹುಲಿಯ ಬೇಟೆ ನಡೆಯುತ್ತದೆ.
ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ಬಿಳಿಗಿರಿರಂಗನಬೆಟ್ಟ, ಸತ್ಯಮಂಗಳ, ವಯನಾಡ್, ನಾಗರಹೊಳೆ, ಮುದುಮಲೈ ಹುಲಿ ಸಂರಕ್ಷಿತಾರಣ್ಯಗಳನ್ನು ಹೊಂದಿರುವ ದಕ್ಷಿಣ ಭಾರತದ ನೀಲಗಿರಿ ಅರಣ್ಯ ಪ್ರದೇಶವು ಅತ್ಯುತ್ತಮ ಸಂರಕ್ಷಣೆಯ ವಲಯ ಎಂಬ ಹೆಗ್ಗಳಿಕೆ ಯನ್ನು ಹೊಂದಿದೆ. ಆದರೆ, ಈ ಪ್ರದೇಶದಲ್ಲಿ ಕೂಡ ಕಾಡಿನ ವಿಸ್ತಾರ ಕುಗ್ಗುತ್ತಿದೆ ಮತ್ತು ಅಡೆ ತಡೆ ಇಲ್ಲದ ಸಂಚಾರಕ್ಕೆ ಅಡ್ಡಿ ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಗಳು, ಕೃಷಿಗಾಗಿ ಕಾಡಿನ ಒತ್ತುವರಿ, ಜಲ ವಿದ್ಯುತ್ ಯೋಜನೆಗಳು ಹುಲಿಗಳನ್ನು ಸಣ್ಣ ಪ್ರದೇಶಕ್ಕೆ ಸೀಮಿತಗೊಳಿಸುತ್ತವೆ. ಹೊಸ ಆವಾಸಸ್ಥಾನಗಳನ್ನು ಹುಡುಕಿಕೊಳ್ಳಲು ಸಾಧ್ಯವಾಗದೆ ಹುಲಿಗಳ ನಡುವಣ ಸಂಘರ್ಷದಲ್ಲಿಯೂ ಹಲವು ಹುಲಿಗಳು ಸಾಯುತ್ತವೆ. ಬಲಿಮೃಗಗಳ ಸಂಖ್ಯೆಯಲ್ಲಿ ಕುಸಿತ ಕೂಡ ಹುಲಿಗಳ ಸಂತತಿ ವೃದ್ಧಿಗೆ ಪ್ರತಿಕೂಲವಾಗುತ್ತದೆ.
ಅಂತರರಾಷ್ಟ್ರೀಯ ಹುಲಿ ದಿನ ಇಂದು
ಅಂತರರಾಷ್ಟ್ರೀಯ ಹುಲಿ ದಿನವನ್ನು 2010 ಜುಲೈ 29ರಿಂದ ಆಚರಿಸಲಾಗುತ್ತಿದೆ. ಜಾಗತಿಕವಾಗಿ ಅಳಿಯುತ್ತಿರುವ ಹುಲಿ ಸಂತತಿಯನ್ನು ಉಳಿಸಲು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಹುಲಿ ಶೃಂಗ ಸಭೆ ನೆರವಾಯಿತು. 13 ದೇಶಗಳು ಹುಲಿ ರಕ್ಷಣಾ ಅಗತ್ಯದ ಬಗ್ಗೆ ಉಪಕ್ರಮ ಆರಂಭಿಸಿದವು. ಇದರ ಫಲವಾಗಿ ಇಂದು ವನ್ಯಜೀವಿ ಕಾಯ್ದೆಗಳು ರೂಪುಗೊಂಡಿವೆ. ಹುಲಿ ಬೇಟೆ, ಕಳ್ಳ ಸಾಗಣೆ, ಮೂಳೆ, ಕೂದಲು, ಚರ್ಮ ಮತ್ತಿತರ ಭಾಗಗಳನ್ನು ಹೊಂದುವುದು 1972ರ ವನ್ಯಜೀವಿ (ರಕ್ಷಣಾ) ಕಾಯ್ದೆ ನಿರ್ಬಂಧಿಸಿದೆ.
ಸಂಗ್ರಹ ಮಾಹಿತಿ.
© 2024 All Rights Reserved by sumumar smk
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ